Search This Blog

Friday, July 22, 2011

ಜೀವಿ



ಮುದ್ದು ಮುದ್ದಾಗಿ ಮಾತನಾಡುವ ಗಿಣಿಯಾಗಿದ್ದೆ ನಾ
ನೀ ಹೀಗೇಕೆ ನನ್ನ ಪ್ರೇಮ ಪಂಜರದೊಳು ಬಂಧಿಸಿ ಮೂಕನಾಗಿಸಿದೆ
ಸದಾ ನಲಿಯುತ ಜಿಗಿದಾಡುವ ಜಿಂಕೆಯಾಗಿದ್ದೆ ನಾ
ನೀ ಹೀಗೇಕೆ ನನ್ನ ಕಣ್ಣಿನಲೇ ಬೇಟೆಯಾಡಿ ಕೊಂದೆ

ಕಿಡಿಗೇಡಿ ಕುಚೇಷ್ಟಗಳ ಕಡಲಿನಲಿ ಮುಳುಗಿದ್ದ ಕಪಿಯಾಗಿದ್ದೆ ನಾ
ನೀ ಹೀಗೇಕೆ ನನ್ನ ಮನ ತಿದ್ದಿಸಿ ಮಾನವನಾಗಿಸಿದೆ
ಸದಾ ಕುತಂತ್ರಗಳ ಬಲೆ ಹೆಣೆವ ಚಾಣಾಕ್ಷ ನರಿಯಾಗಿದ್ದೆ ನಾ
ನೀ ಹೀಗೇಕೆ ನನ್ನ ಬುದ್ಧಿಗೆ ಮಂಕು ಕವಿಸಿದೆ

ಹೇಳದೆ ಕೇಳದೆ ಕಂಡಲ್ಲಿ ಹರಿದಾಡುವ ಹಾವಾಗಿದ್ದೆ ನಾ
ನೀ ಹೀಗೇಕೆ ನನ್ನ ಹೊರ ಬಿಡದೆ ಹೃದಯ ಬುಟ್ಟಿಯಲಿ ಬಚ್ಚಿಟ್ಟೆ
ಮಾತಿಗೆ ಮುನ್ನವೇ ಬಂದೆರಗುವ ದಿಟ್ಟ ಹುಲಿಯಂತಿದ್ದೆ ನಾ
ನೀ ಹೀಗೇಕೆ ನನ್ನ ಸಿಹಿ ಭಾವದ ಬಲೆಯಲಿ ಬೀಳಿಸಿದೆ

ಜಗದ ಜಂಭದಂಬಾರಿಯ ಹೊತ್ತ ಮದಗಜದಂತಿದ್ದೆ ನಾ
ನೀ ಹೀಗೇಕೆ ನನ್ನ ಹೃದಯದರಸಿಯಾಗಿ ಮೆರೆದು ಮದವಡಗಿಸಿದೆ
ಕಳ್ಳ ಹೆಜ್ಜೆಯನಿಟ್ಟು ಮೆಲ್ಲ ಕದ್ದು ನೋಡುವ ಬೆಕ್ಕಿನಂತಿದ್ದೆ ನಾ 
ನೀ ಹೀಗೇಕೆ ನನ್ನ ಕೊರಳಿಗೆ ಕಾಣದಂತೆ ಗಂಟೆ ಕಟ್ಟಿದೆ


- ಡಿ.ಗು.ರಾವ್



Thursday, July 21, 2011

ಚೆಲುವು


ಆಕೆ ಚೆನ್ನ 
ಈಕೆ ಇನ್ನೂ ಚೆನ್ನ
ಆಕೆ ಈಕೆಗಿಂತ ನನ್ನಾಕೆ ನನಗೆ ಬಲು ಚೆನ್ನ!

ಎಲ್ಲಾ ಹೆಣ್ಣಿನ ದೇಹಕೂ ನಿನ್ನ ಮೊಗವೇ ಏಕಿದೆ?
ಯೌವ್ವನ ಮಾಡಿದ ಮನದ ಗಾಯಕೆ ನಿನ್ನೊಲುಮೆಯ ಔಷಧಿ ಬೇಕಿದೆ

ಸೌಂದರ್ಯದ ಕಡಲಿನಲಿ ದೊರೆತ ಹೊಳೆವ ಮುತ್ತೊಂದು ನೀನು
ಈ ಕಣ್ಣಿನಲಿ ಬಂದು ಸೇರು ಬೇಡೆನು ಮತ್ತೊಂದು ನಾನು

ನಗುತ ಅರಳಿರುವ ಸುಮದಲ್ಲೂ ತುಂಬಿದೆ ನಿನ್ನದೇ ಪರಿಮಳ
ಹುಣ್ಣಿಮೆಯ ಚಂದಿರೆಯೆ ನಿನಗೆ ನನ್ನೆದೆಯೇ ಬಾಂದಳ

ಅರಿಯದೆ ಕವಿಯಾದೆ ಇಂದು ನಿನ್ನ ಸೆಳೆವ ಕಣ್ಣ ಕಂಡು
ಧನ್ಯನಾದೆ ಇಂದು ನಿನ್ನೊಲವ ಸುಧೆಯನುಂಡು
- ಡಿ. ಗು. ರಾವ್.

Wednesday, July 7, 2010

ಅರಮನೆ

ನಿನ್ನ ಮನೆಯ ಚಾವಡಿಯಿಂದ
       ನನ್ನ ಕೆಳೆಗೆ ನೂಕಿ ಬಿಡು
ಮರುಭೂಮಿಯಲಿ ಬಿತ್ತಿದ ಮೋಡವ
       ನೀನೆ ಹಿಂದಕೆ ಕಳಿಸಿ ಬಿಡು
ಓ ದೇವರೇsss, ದಯಮಾಡಿ ಆ ಮರೆವ ಕೊಡು...


ಮುಂಬೆಳಗಿನಲಿ ಕಂಡ ಸ್ವಪ್ನವ
       ಕಣ್ಣಿಗೆ ಕಾಣದಂತೆ ಮುಚ್ಚಿ ಬಿಡು
ಎದೆಯ ಕೊರಗು ಹೊರಗ ಬಾರದಂತೆ
       ಬಾಯಿಗೆ ಬೀಗ ಹಾಕಿ ಬಿಡು
ಬಾಳಿನ ಪಯಣದ ನಡುದಾರಿಯಲಿ
       ಸುಮ್ಮನೆ ಹೇಳದೆ ಹಾಗೆ ಹೋಗಿ ಬಿಡು
ಪ್ರೇಮದ ಶಾಲೆಯ ಗುರುತಿನ ಚೀಟಿಯ
       ತಾರದೆ ಹೋದಕೆ ಹೊರ ಹಾಕಿ ಬಿಡು


ಚಪ್ಪಾಳೆಗೆ ಕೈ ಸೇರಿಸೋ ಮುನ್ನ
       ಚಿಟಿಕೆ ಹೊಡೆದು ಕೈ ತೊಳೆದು ಬಿಡು
ಅಂದದ ಅರಗಿನ ಅರಮನೆಯಲ್ಲಿ
       ದೀಪವ ಬೆಳಗಿಸಿ ಸರಿದು ಬಿಡು, ದೂರ ಸರಿದು ಬಿಡು...


ವಿ.ಸೂ.  ಮೂಲ ಆಧಾರ: ಯೋಗರಾಜ್ ಭಟ್, ಗುರುಕಿರಣ್ , "ನನ್ನ ಎದೆಯಲಿ...", ಅರಮನೆ ಚಿತ್ರ.

Wednesday, May 19, 2010

ಕರುಣಾ ಕಾಮಧೇನು

        'ಕನ್ನಡ' ಎಂಬ ಬತ್ತದ ಪದ ಭಂಡಾರವುಳ್ಳ ಸಕ್ರಿಯೆ ಭಾಷೆಯು, ನನ್ನ ಮಾತೃಭಾಷೆ ಎಂದು ಹೊಗಳಿ ಹಾಡಲು ಬಾರದಿದ್ದರೂ, ಅಲ್ಪದರಲ್ಲಾದರೂ ತೃಪ್ತನಾಗಬೇಕಾದರೆ ಒಂದಿಷ್ಟು ಮಾತಿನಲ್ಲಿ ಹೇಳಬಹುದು.
        'ಕಸ್ತೂರಿ' ಎಂದು ಕರೆಯೆಲ್ಪಡುವ ಈ 'ಕಾಮಧೇನು'ವಿಗೆ ಕರುನಾಡಿನವರಾದ ನಾವೆಲ್ಲರೂ  ಕೈ ಮುಗಿದು ನಮಿಸಲೇಬೇಕು. ಇನ್ನು ಈ ಭಾಷೆಗೆ ವಿವಿಧ ರೂಪ ಕೊಟ್ಟು ತನ್ನ ಮುದ್ದು ಕಂದನಂತೆ ಬೆಳೆಸುತ ಬಂದಿರುವ ಈ ಜನನಿ, ಪುಣ್ಯ ಭೂಮಿಗೆ 'ಕರ್ನಾಟಕ'ವೆಂದು ನಾಮಾಲಂಕರಿಸಲಾಗಿದೆ. ಹೀಗಿರುವಾಗ, ನಮ್ಮ ಮಣ್ಣಿನ ಸೊಗಡಿನ ಬಗ್ಗೆ ಹೇಳಿದಷ್ಟೂ ಈ ಜನ್ಮ ಪಾವನವಾಗುದಲ್ಲದೆ, ಈ ನಾಡಿನ ಕೀರ್ತಿ ಇನ್ನೂ ನಾಜೂಕಾಗಿ ಬಿಗಿದು ಮರವನಪ್ಪುವ ಮಲ್ಲಿಗೆ ಬಳ್ಳಿಯಂತೆ ಪರಿಮಳವ ಎಲ್ಲೆಡೆ ಚೆಲ್ಲುತ ಹಬ್ಬುವುದು.
        'ಕಲ್ಪತರು' ಎಂದೇ ಮನೆ ಮಾತಾಗಿರುವ ಈ ಮನೆ ಮನೆಯ ಮನದ ಮಾತಿನ ಕುರಿತು ಮಾತಿನಲಿ ಹೇಳುವುದರೊಡನೆ ತುಸು ನನ್ನ ತೊದಲ ಕವಿ ನುಡಿಯ ಕಾಣಿಕೆ ನೀಡಬೇಕೆಂಬ ಆಸೆಯಾಗಿ,ನಿಮ್ಮ ನಯನಗಳ ನೇರ ದೃಷ್ಟಿಗೆ ತಾಕುವಂತೆ ತೋರ ಪಡಿಸುತ್ತಿದ್ದೇನೆ!
                      "ಕನ್ನಡ ಕಾಮಧೇನು, ಕರ್ನಾಟಕ ಕಲ್ಪವೃಕ್ಷ"   


ಈ ಮಣ್ಣಿನ ಸಿಹಿಯಾಸೆಗೆ
              ರೈತ ನೆಟ್ಟ ಸಸಿ ಚಿಗುರೊಡೆದಿದೆ
ಈ ಹೆಣ್ಣಿನ ಸವಿ ಮಾತಿಗೆ
              ಶಕುನದ ಹಕ್ಕಿಗಳು ಶುಭ ಕೋರಿವೆ

ಕನಸಿನ ಕಂಗಳಲಿ
           ನಾಳೆಯ ನವ ಯುವಕರು ನುಡಿ ಬರೆಯುವ
                        ಮನಮೋಹಕ ನೋಟ ಕಂಡಿಹೆಯೇನು?
ತನುವ ಮಂದಿರದಲಿ
          ಸ್ನೇಹದ ಘಂಟಾಘೋಷ ಮೊಳಗಿಸುವ ಮನವ
                       ತನುಜಾತರಿಗೆ ನೀಡಿಹೆಯೇನು?

'ಶರಣು'ಯೆಂದು ಬಂದವರಿಗೆ
                 ಶ್ರೀರಕ್ಷಾ ಕವಚ ತೊಡಿಸುವ
                             ಪಣ ತೊಟ್ಟಿಹೆಯೇನು?
'ದೇಹಿ'ಯೆಂದು ಬಂದವರಿಗೆ
                 ದಯಪಾಲಿಸುವ 'ಕರುಣಾ ಕಾಮಧೇನು'
                             ಈ ನಮ್ಮ ಕರ್ನಾಟಕ ನೀನಲ್ಲದೆ ಬೇರೆಯೇನು?

ನಿಮ್ಮ
     ಡಿ.ಗು.ರಾವ್ 

Tuesday, May 18, 2010

ಪ್ರಾರ್ಥನೆ

       'ಪ್ರೀತಿ'ಯ ಬಗ್ಗೆ ಏನೇ ಹೇಳ ಹೊರಟರೂ ಅದು ಹಳೆಯದೆನಿಸುವಷ್ಟು ವರ್ಣ ರಂಜಿತ ವ್ಯಾಖ್ಯಾನಗಳು, ವಿವರಣೆಗಳು ಮತ್ತು ವರ್ಣನೆಗಳು ಸಿಗುತ್ತವೆ! ಹೀಗಿರುವಾಗ ಹೇಳಲು ಹೊಸದಾದು ಏನೂ ಇಲ್ಲವೆಂದು, ಬರವಣಿಗೆಗೆ ಬರ ಬರಬಹುದೆಂದು ಒಂದು ಕ್ಷಣ ಎನಿಸಿದರೂ ಮರುಘಳಿಗೆ 'ಮನ'ವೆಂಬ ಮಾಯಾಜಾಲದ ಯಾವುದೋ ಮೂಲೆಯಿಂದ "ಒಲವು ಕವಿಗಳಿಗೆ ಕಲ್ಪವಾಗಿ, ಪ್ರೇಮಿಗಳಿಗೆ ಪ್ರೇರಣೆಯಾಗಿ, ಶಿಲ್ಪಿಗಳಿಗೆ ಶಿಲೆಯಾಗಿ ಒಟ್ಟಾರೆ ಅಕ್ಷಯವಾಗಿ ನಿತ್ಯ ನಿರಂತರ ನಿರ್ಮಲವಾದುದು" ಎಂಬ ಮಧುರಭಾವ ಸದಾ ಬುದ್ಧಿಯ ಕಿವಿಯಲ್ಲಿ ಗುನುಗುತ್ತಿರುತ್ತದೆ!
       ಆ ನಿಟ್ಟಿನಲ್ಲಿ ನನ್ನ ಈ ಮುಂದಿನ ಸಾಲುಗಳು ಯಾವ ಕಥಾವಸ್ತುವನ್ನಾಧರಿಸಿರುತ್ತದೆ ಎಂಬುದನ್ನು ಜಗಜ್ಜಾಹೀರುಗೊಳಿಸಿ ನಿಮ್ಮ ಮುಂದೆ ಅಥವಾ ಎದುರಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅಂದಹಾಗೆ ಈ ಸಾಲುಗಳು ಸಹ ಹೊಸತಿನ ಮುಖವಾಡ ಧರಿಸಿ, ಅದೇ ಪ್ರೇಮ ಪುರಾಣದ ಕಲಸು ಮೇಲೋಗರವಾಗಿದೆ!

                                  ಪ್ರಾರ್ಥನೆ 

ಅನುರಾಗಕೆ ಅನುವು ಕೊಟ್ಟರೆ
                   ಮನದಲಿ ನಾ ಮನೆಯ ಮಾಡುವೆ
ಕೋಗಿಲೆಯೇ ನಿನ್ನ ಇಂಪಾದ ದನಿ ಕೊಟ್ಟರೆ 
                   ಸವಿ ಹಾಡಿನಲೇ ನಿನ್ನ ಮಾತನಾಡಿಸುವೆ

ಹೆಸರಿರದ ಹೊಸ ಬಂಧವೊಂದು 
                  ಎದೆಯಲಿ ಹಸಿರಾಗಿ ಹಬ್ಬಿದೆ
ಹೆಸರಿನಿಂದ ನಿನ್ನ ಜಪ ಮಾತ್ರಕೆ 
                  ಆನಂದದಲಿ ನವಿರಾಗಿ ನನ್ನೆದೆ ಉಬ್ಬಿದೆ

ಪ್ರೇಮಪೂಜೆಗೆ ನೀ ಒಳ ಹೋದಾಗ
                 ನಾನಾಗಿರುವೆ ಬಾಗಿಲ ಮುಂದಿನ ತಿರುಕ!
ಈ ದಯನೀಯ ಸ್ಥಿತಿಯ ಕಂಡು
                 ನೀ ಒಮ್ಮೆ ಪಟ್ಟರೆ ಸಾಕು ಮರುಕ

ಈ ಆಳ ಒಲವ ಸಾಗರವ 
                ನೀ ಹಿಡಿಮುಷ್ಟಿಯಲಿ ತುಂಬಿಟ್ಟ ಬಗೆ ತಿಳಿಸು
ದುರುಳ ನೆನಪಿನ ಆಳ ಕಹಿಯಲಿ ತೋರಿ ಈ ಮುದ್ದು ಮುಖವ
                ದಯಮಾಡಿ ಈ ಬಡ ಉಸಿರ ಉಳಿಸು
ನಿಮ್ಮ 
    ಡಿ.ಗು.ರಾವ್ 





Wednesday, May 12, 2010

ಮದುವೆ

ಮನದ ಮೂಲೆಯಲಿ    
          ಬಚ್ಚಿಟ್ಟ ಒಲವ ಆಭರಣವ ತೊಡಿಸುವ ಸಂಬಂಧ
ಬಾಳಿನ ಪ್ರತಿ ಹೆಜ್ಜೆಯಲಿ
          ಸಂಗಾತಿಯು ಸಪ್ತಪದಿಯಿಡುವ ಕಂಕಣ ತೊಡಿಸುವ ಅನುಜನ್ಮದ ಅನುಬಂಧ
ಸರಳ ಸಂಪ್ರದಾಯಗಳು 
         ಸರಾಗದಲಿ ಸಂಚರಿಸುವ ನವ ಸಂಭ್ರಮದ ತೀಡಿದ ಶ್ರೀಗಂಧ
ಮನಗಳೆರಡರ ಸಶೇಷ ಬೆಸುಗೆಯ
         ಜಾಗತಿಕ ಅಧಿಕೃತ ಸರಳ ಒಪ್ಪಂದ....
        

Saturday, May 8, 2010

ಮಾತೃವಿಗೆ ಮನದ ಮಾತು

ನಮಸ್ತೆ ಬ್ಲಾಗ್ಗೆ,
ಸುದಿನವಾದ ಇಂದು ಅಂದರೆ ಮೇ ೯ರಂದು ಒಂದು ಪುಟ್ಟ ಸಂದೇಶ ಬರೆಯುವ ಮನಸಾಗಿದೆ. ಮನುಕುಲದ ಮನವೇ ಕರಗಿ ನೀರಾಗಿ ಮಾತೃವಿಗೆ ಆನಂದಭಾಷ್ಪದ ನಮನ ಸಲ್ಲಿಸುವ ಅಮೃತಮುಹೂರ್ಥ ಬಹುಷಃ ಇನ್ದೊಂದೇ ಸಿಗುವುದು!
          ಎಲ್ಲಾದಕ್ಕೂ ಒಂದೊಂದು ದಿನವಿರುವಂತೆ, ಮಾತೆಯರ ದಿನಾಚರಣೆ ಇರುವುದು ಆಚರಿಸುವುದಕ್ಕೋ ಅಥವಾ ಜ್ಞಾಪಿಸುವುದಕ್ಕೋ! ಏನೇ ಇರಲಿ, ನಮಗೆ ನವ ವಸಂತಕ್ಕೊಮ್ಮೆ ಕಡೆಯಪಕ್ಷ ಇಷ್ಟಾದರೂ ಜ್ಞಾಪಿಸುವಂತೆ ಮಾಡುವುದಕ್ಕೇ ಬಹುಷಃ ಯಾರೋ ದೂರಾಲೋಚಿಗಳು, ಈ ದಿನವನ್ನು ಮಾಡಿರಬಹುದು ಕಂಡು ಈ ಬೆಳೆಯುತ್ತಿರುವ ಜಾಗತಿಕ ಯಾಂತ್ರಿಕದ ಪಿಡುಗನ್ನು!
ಸಾರ್ವತ್ರಿಕ ತಾಯಿಂದಿರ ದಿನದ ಶುಭಾಶಯಗಳು( ಅಮ್ಮನಿಗೆ ತಿಳಿಸುತ್ತ) ಹೇಳುತ್ತಾ ನನ್ನ ಮಾತೃ ಪ್ರೇಮವನ್ನು ಈ ರೀತಿ ಅಭಿವ್ಯಕ್ತಪಡಿಸುತ್ತಿದ್ದೇನೆ....

                         ಮಾತೃವಿಗೆ ಮನದ ಮಾತು       
ಹಸುಳೆಯ ನಯನದ  ತೆರೆಯ ಘಮಿಸದ ಸುಮವರಳಿ ನಕ್ಕಾಗ
                          'ಜೈವಿಕ ದೈವಿಗೆ' ನಮಿಸುತ ನಲಿಯಿತು
ಶಿಶುವಿನ ಮೊಸೆಳೆಯ ಕಣ್ಣೀರಿಗೂ
                          ಕರಗಿತು ಆ ಕಾರ್ಮೋಡದ ಶಶಿಯ ಒಡಲು
ಕಂದನ ಕಿಡಿಗೇಡಿಯ ಕಿರಿಕಿರಿಗೂ
                          ಕ್ಷಮೆಯ ಕ್ಷೀರಭರಿತ ಕಡಲು
ಮಗುವಿನ ಮುಗ್ಧ ಮನದ ಮನೆಯ ಮಾಲಕಿಯೇ
                          ಶಯನಕೆ ಸೋಪಾನವೇ ಈ ಮಹದಾದ ಮಡಿಲು

- ಡಿ.ಗು.ರಾವ್..